ತಾನ್‍ಸೇನ್
1550-1610. ಭಾರತೀಯ ವಾಗ್ಗೇಯಕಾರರಲ್ಲಿ ಪ್ರಸಿದ್ಧನಾದವ. ಮಹಮದ್ ಗೌಸ್ ಎಂಬ ಮುಸಲ್ಮಾನ ಸಾಧುವಿನ ಅನುಗ್ರಹದಿಂದ ಆಗಿನ ಗ್ವಾಲಿಯರ್ ಪ್ರಾಂತ್ಯಕ್ಕೆ ಸೇರಿದ ಬಾಹಿರ್ ಎಂಬ ಗ್ರಾಮದಲ್ಲಿ ವಾಸವಾಗಿದ್ದ ಮಕರಂದ ಪಾಂಡೆ ಎಂಬಾತನಿಗೆ ಮಗನಾಗಿ ಜನಿಸಿದ. ಬಾಲ್ಯದಲ್ಲಿಯೇ ಈತನಿಗಿದ್ದ ಸಂಗೀತದಲ್ಲಿನ ಆಸಕ್ತಿಯನ್ನು ಗಮನಿಸಿದ ಹರಿದಾಸ ಸ್ವಾಮಿ ಎಂಬುವರು ಈತನನ್ನು ಉತ್ತರಾದಿ ಸಂಗೀತದಲ್ಲಿ ಮುಂದುವರೆಯುವಂತೆ ಪ್ರೋತ್ಸಾಹಿಸಿದರು. ಗಂಧರ್ವನಂತೆ ಹಾಡುತ್ತಿದ್ದ ಈತನಿಗೆ ರಾಜಮಾನ್‍ಸಿಂಗ್ ತೋಮರ (1486-1518) ಗ್ವಾಲಿಯರ್ ನಗರದಲ್ಲಿ ಸ್ಥಾಪಿಸಿದ್ದ ಸಂಗೀತ ಶಾಲೆಯಲ್ಲಿ ಶಿಕ್ಷಣ ದೊರೆಯಿತು.

ಕ್ರಮೇಣ ಈತನ ಕೀರ್ತಿ ಉತ್ತರ ಭಾರತದಲ್ಲೆಲ್ಲ ಹರಡಿತು. ಈತನ ಖ್ಯಾತಿಯನ್ನು ಕೇಳಿದ ಮೊಗಲ್ ಚಕ್ರವರ್ತಿ ಅಕ್ಬರ್ ಈತನನ್ನು ಗ್ವಾಲಿಯರ್‍ನಿಂದ ತನ್ನ ಆಸ್ಥಾನಕ್ಕೆ ಕರೆಸಿಕೊಂಡು ಆಸ್ಥಾನದ ನವಮಣಿಗಳಲ್ಲಿ ಒಬ್ಬನನ್ನಾಗಿ ನೇಮಿಸಿಕೊಂಡು (1563). ಚಕ್ರವರ್ತಿ ಮತ್ತು ಹಿಂದೂ ದೇವತೆಗಳನ್ನು ಕುರಿತು ತಾನ್‍ಸೇನ್ ಅನೇಕ ಕೀರ್ತನೆಗಳನ್ನು ರಚಿಸಿದ. ಹಾಗೆ ಈತನಿಂದ ರಚಿಸಲ್ಪಟ್ಟ ಕೀರ್ತನೆಗಳನ್ನು ಈಗಲೂ ಉತ್ತರ ಭಾರತದ ಜನ ಭಜನಮಂದಿರಗಳಲ್ಲೂ ಸಂಗೀತ ಕಚೇರಿಗಳಲ್ಲೂ ಹಾಡುತ್ತಾರೆ. 

ಉತ್ತರಾದಿ ಗಾಯನದಲ್ಲಿ ಧ್ರುಪದ್ ಹಾಡುಗಾರಿಕೆ ಅತ್ಯಂತ ಕಷ್ಟವಾದುದು. ಈ ಧ್ರುಪದ್ ಶೈಲಿಯ ಆಕಾರ ಪ್ರಕಾರಗಳನ್ನು ರೂಪಿಸಿ ರೂಢಿಗೆ ತಂದ ಆದ್ಯ ಪುರುಷ ತಾನ್‍ಸೇನ್. ಮೀರಾಬಾಯಿ, ಸೂರ್‍ದಾಸ್, ತುಲಸೀದಾಸ್ ಮೊದಲಾದ ವಾಗ್ಗೇಯಕಾರರು ತಾನ್‍ಸೇನ್‍ನ ಸಮಕಾಲೀನರು ಎನ್ನಲಾಗಿದೆ. 

ಮುಂದೆ ತಾನ್‍ಸೇನ್ ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿದನೆನ್ನಲಾಗಿದೆ. ಈತನಿಗೆ ಬಿಲಾಸ್‍ಖಾನ್ ಮೊದಲಾದ ನಾಲ್ಕುಜನ ಗಂಡುಮಕ್ಕಳು ಮತ್ತು ಸರಸ್ವತಿ ಎಂಬ ಒಬ್ಬ ಹೆಣ್ಣುಮಗಳೂ ಇದ್ದರು. ಆ ಕಾಲದ ಅದ್ವಿತೀಯ ವಾದ್ಯಗಾರನೂ ತಾನ್‍ಸೇನ್‍ನ ಶಿಷ್ಯನೂ ಆಗಿದ್ದ ಸೌಬತ್‍ಖಾನನಿಗೆ ಸರಸ್ವತಿಯನ್ನು ಕೊಡಲಾಗಿತ್ತು. ಈತನ ಮಗ ಬಿಲಾಸ್‍ಖಾನನೂ ತಂದೆಯಂತೆ ಒಳ್ಳೆಯ ಗಾಯಕನೆನಿಸಿದ್ದ.

ತಾನ್‍ಸೇನ್ ಹಾಡಲು ಕುಳಿತರೆ ರಾಗದೇವತೆಗಳೇ ಮೈದೆಳೆದು ಬರುತ್ತಿದ್ದರು ಎಂದು ಹೇಳುವುದುಂಟು. ಇದರ ಸಮರ್ಥನೆಗಾಗಿ ಒಂದು ಪ್ರಚಲಿತ ಕತೆಯುಂಟು. ಒಂದು ದಿನ ಸಾಯಂಕಾಲ ತಾನ್‍ಸೇನ್ ಅಕ್ಬರನ ಆಸ್ಥಾನದಲ್ಲಿ ಹಾಡುತ್ತಿದ್ದ. ಅರಮನೆಯ ಪರಿವಾರವೇ ಮೊದಲ್ಗೊಂಡು ಎಲ್ಲರೂ ಗಾಯನದಲ್ಲಿ ತಲ್ಲೀನರಾಗಿದ್ದರು. ಕತ್ತಲಾಯಿತು. ಅರಮನೆಯ ದೀಪಗಳು ಹತ್ತಲಿಲ್ಲ. ಇದನ್ನು ಗಮನಿಸಿದ ತಾನ್‍ಸೇನ್ ಕೂಡಲೇ ದೀಪಕರಾಗವನ್ನು ಹಾಡಲಾರಂಭಿಸಿದಾಗ ಸಭೆಯೆಲ್ಲ ಜ್ಯೋತಿರ್ಮಯವಾಯಿತು. ಗಾನ ಮುಗಿದ ಕೂಡಲೇ ಮತ್ತೆ ಅರಮನೆಯಲ್ಲಿ ಕತ್ತಲು ಆವರಿಸಿತು. ಈ ಅದ್ಭುತವನ್ನು ವೀಕ್ಷಿಸಿ ಆಶ್ವರ್ಯಚಕಿನಾದ ಅಕ್ಬರ್ ತಾನ್‍ಸೇನ್‍ನಿಗೆ ಸಂಗೀತ ಸಮ್ರಾಟನೆಂಬ ಬಿರುದನ್ನು ಕೊಟ್ಟನಂತೆ. ಇನ್ನೊಮ್ಮೆ ದೇಶದಲ್ಲಿ ಕ್ಷಾಮ ಸಂಭವಿಸಿತು. ಮಳೆಯಿಲ್ಲದೆ ಎಲ್ಲೆಲ್ಲೂ ಕ್ಷೋಭೆಯುಂಟಾಯಿತು. ಅಕ್ಬರನ ಕೋರಿಕೆಯಂತೆ ತಾನ್‍ಸೇನ್ ಮೇಘಮಲ್ಹಾರ್ ರಾಗವನ್ನು ಆಡಲು ಆರಂಭಿಸಿದ ತತ್‍ಕ್ಷಣ ಆಕಾಶದಲ್ಲಿ ಮೋಡ ಕಟ್ಟಿ ಮಳೆ ಸುರಿಯಲು ಆರಂಭವಾಯಿತಂತೆ. ತಾನ್‍ಸೇನ್ ತನ್ನ ಗಾಯನ ಶಕ್ತಿಯಿಂದ ಯಮುನಾ ನದಿ ಹರಿಯುವುದನ್ನು ತಡೆಯುತ್ತಿದ್ದನೆಂದು ಮತ್ತೊಂದು ಪ್ರತೀತಿಯಿದೆ.

ತಾನ್‍ಸೇನನ ಮರಣಕಾಲದಲ್ಲಿ ಆಶ್ರಯದಾತನೂ ಸ್ನೇಹಿತನೂ ಆಗಿದ್ದ ಅಕ್ಬರ್ ಚಕ್ರವರ್ತಿ ಹತ್ತಿರದಲ್ಲೇ ಇದ್ದನಲ್ಲದೆ ಆತನ ಇಚ್ಛೆಯ ಮೇರೆಗೆ ಆತನನ್ನು ಗ್ವಾಲಿಯರ್‍ನಲ್ಲಿ ಸಮಾಧಿ ಮಾಡಿಸಿದ. ತಂದೆ ಶವದ ಪಕ್ಕದಲ್ಲೇ ಕುಳಿತು ಮಗ ದುಃಖಾವೇಶದಿಂದ ಒಂದು ರಾಗವನ್ನು ಹಾಡಿದನಂತೆ. ಆ ರಾಗದಿಂದ ಪ್ರಸನ್ನನಾದ ತಾನ್‍ಸೇನನ ನಿರ್ಜೀವವಾದ ಬಲಗೈ ಎದ್ದು ಆತನನ್ನು ಆಶೀರ್ವದಿಸಿತಂತೆ. ಆ ರಾಗವೇ ಬಿಲಾಸ್‍ಖಾನಿ ತೋಡಿಯೆಂಬ ಹೆಸರಿನಿಂದ ಪ್ರಖ್ಯಾತವಾಗಿದೆ.

ತಾನ್‍ಸೇನ್ ಉತ್ತರಾದಿ ಸಂಗೀತಕ್ಕೆ ಸಂಬಂಧಿಸಿದಂತೆ ಸಂಗೀತಸಾರ ಮತ್ತು ರಾಗಮಾಲವೆಂಬ ಎರಡು ಗ್ರಂಥಗಳನ್ನು ರಚಿಸಿದ್ದಾನಲ್ಲದೆ ಮಿಯಾಮಲ್ಹಾರ್, ಮಿಯಾನ್ ಕಿ ತೋಡಿ, ಮಿಯಾನ್ ಕಿ ಸಾರಂಗ್, ದರ್ಬಾರ್ ಮುಂತಾದ ರಾಗಗಳನ್ನು ಸೃಜಿಸಿದ್ದಾನೆ. ತಿರುವಾಯೂರಿನಲ್ಲಿ ತ್ಯಾಗರಾಜರ ಆರಾಧನೆಯನ್ನು ದಾಕ್ಷಾಣಾತ್ಯ ಗಾಯಕರು ಭಕ್ತಿಯಿಂದ ನೆರವೇರಿಸುವಂತೆ ಉತ್ತರಾದಿ ಗಾಯಕರು ಗ್ವಾಲಿಯರ್‍ನಲ್ಲಿರುವ ತಾನ್‍ಸೇನನ ಸಮಾಧಿಯ ಬಳಿ ಅಷ್ಟೇ ವಿಜೃಂಭಣೆಯಿಂದ ತಾನ್‍ಸೇನನ ಆರಾಧನೆ ನಡೆಸುತ್ತಾರೆ. ತಾನ್‍ಸೇನನ ಸಮಕಾಲೀನನಾದ ಅಬುಲ್ ಫಜಲ್ ತನ್ನ ಐನೆ- ಅಕ್ಬರಿ ಗ್ರಂಥದಲ್ಲಿ ಈತನ ಬಗ್ಗೆ ಬರೆಯುತ್ತಾ ತಾನ್‍ಸೇನನಂಥ ಗಾಯಕ ಹಿಂದಿನ ಸಾವಿರ ವರ್ಷಗಳಲ್ಲಿ ಭಾರತದಲ್ಲಿ ಹುಟ್ಟಿರಲಿಲ್ಲ, ಈತ ರಚಿಸಿದ ರಾಗಗಳನ್ನು ಭಾರತದ ಜನ ಎಲ್ಲೆಲ್ಲೂ ಹಾಡುತ್ತಿದ್ದರು- ಎಂದಿದ್ದಾನೆ. ತಾನ್‍ಸೇನ್ ಭಾರತೀಯ ಸಂಗೀತ ಪರಂಪರೆಗೆ ತನ್ನದೇ ಆದ ಕಾಣಿಕೆ ಸಲ್ಲಿಸಿರುವುದರ ಜೊತೆಗೆ ಹಿಂದೂ ಮುಸ್ಲಿಂ ಸಂಪ್ರದಾಯಗಳಲ್ಲಿ ಸಾಮರಸ್ಯವನ್ನುಂಟು ಮಾಡಿದ ಕೀರ್ತಿಗೂ ಪಾತ್ರನಾಗಿದ್ದಾನೆ. ಈತನ ಕಾಲಕ್ಕಿಂತ ಮುಂಚೆ ಸಂಗೀತವೆಂದರೆ ಬರೀ ಶಾಸ್ತ್ರೀಯ ರೀತಿಯ ಹಾಡುಗಾರಿಕೆಯಾಗಿತ್ತು. ತಾನ್‍ಸೇನ್ ಅದರ ಜೊತೆಗೆ ಮನೋರಂಜಕವಾದ ಲಘುಸಂಗೀತವನ್ನೂ ಬಳಕೆಗೆ ತಂದ

ಅಮೀರ್ ಖುಸ್ರು, ಹಾಡುಗಾರಿಕೆಯನ್ನು ಬಳಕೆಗೆ ತಂದು ಭಾರತೀಯ ಸಂಗೀತ ವಿಕಾಸಕ್ಕೆ ನಾಂದಿ ಹಾಡಿದ ಮೇಲೆ ತಾನ್‍ಸೇನ್ ಆ ಕೆಲಸವನ್ನು ಮುಂದುವರಿಸಿ ಜಯ ಪಡೆದ. ಈತನಿಗೆ ಪರ್ಷಿಯನ್ ಸಂಗೀತದಲ್ಲೂ ಪರಿಶ್ರಮವಿತ್ತು ಎಂದು ತಿಳಿದುಬರುತ್ತದೆ.							
(ಎಸ್.ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ